ನಾವೂ... ನಮ್ಮ ವೆಕೆಷನ್ನೂ...(72)
29 July 2025

ನಾವೂ... ನಮ್ಮ ವೆಕೆಷನ್ನೂ...(72)

SatisHFaction Kannada Podcast from the US

About

ನಾವೂ... ನಮ್ಮ ವೆಕೆಷನ್ನೂ...


ಒಂದೇ ಕಂಪನಿಯಲ್ಲಿ ಹಲವಾರು ವರ್ಷಗಳಿಂದ ಕುರ್ಚಿ ಗಟ್ಟಿ ಹಿಡಿದುಕೊಂಡು ಕುಳಿತುಕೊಂಡವರಿಗೆ ಒಂದು ಹೇಳಲಾಗದ ಮತ್ತು ಹಂಚಲಾಗದ ಅಳಲಿರುತ್ತದೆ, ಅದೇನೆಂದರೆ, ಅವರವರು ಗಳಿಸಿಕೊಂಡ ವೆಕೇಷನ್ ದಿನಗಳನ್ನ ಹೇಗೆ ಕಳೆಯೋದು ಎನ್ನುವುದು!

ಒಂದಾನೊಂದು ಕಾಲದಲ್ಲಿ, ಕಂಪನಿಗೆ ಸೇರಿದ ಮೊದಲ ದಿನಗಳಲ್ಲಿ, ನಮಗೆಲ್ಲ ಕೇವಲ ಎರಡೇ ಎರಡು ವಾರಗಳ ಕಾಲ ರಜೆ ಇರೋದು. ಆಗೆಲ್ಲ ಭಾರತಕ್ಕೆ ಹೋಗಿ ಬರಬೇಕೆಂದರೆ, ಕಷ್ಟ ಪಟ್ಟು ವರ್ಷವಿಡೀ ಕೂಡಿಟ್ಟ ಮೂರು ವಾರಗಳ ರಜೆ ದಿನಗಳು ಯಾವ ಮೂಲೆಗೂ ಸಾಕಾಗುತ್ತಿರಲಿಲ್ಲ. ಹೋಗಿ ಬಂದು ಸುಧಾರಿಸಿಕೊಳ್ಳಲು ಒಂದು ವಾರ ಮುಗಿದು ಹೋಗುತ್ತಿತ್ತು, ಇನ್ನುಳಿದ ಎರಡು ವಾರಗಳಲ್ಲಿ ಏನನ್ನು ಮಾಡುವುದು, ಏನನ್ನು ಬಿಡುವುದು? ಕೊನೆಗೆ ವೆಕೇಷನ್ ಮುಗಿದ ಮೇಲೆ, ಎಷ್ಟೊಂದು ಸುಸ್ತಾಗಿರುತ್ತಿತ್ತೆಂದರೆ, ಭಾರತದ ಟ್ರಿಪ್ ನಂತರ ಮತ್ತೊಂದು ವೆಕೇಷನ್ ಬೇಕು ಎನ್ನುವಷ್ಟು.

ಆಗೆಲ್ಲ ರಜಾ ದಿನಗಳು ಕಡಿಮೆ, ನಮಗೆ ಹೆಚ್ಚು ಬೇಕಾಗಿತ್ತು. ಈಗೆಲ್ಲ, ರಜೆ ದಿನಗಳು ಹೆಚ್ಚು, ನಾವು ಉಪಯೋಗಿಸಿದರೂ ಉಳಿದು ಮತ್ತೆ ಮುಂದಿನ ವರ್ಷಕ್ಕೆ ಹೋಗುವಷ್ಟು! ನನ್ನ ಹತ್ತಿರ ನಲವತ್ತು ದಿನಗಳ ರಜೆ ಇದೆ ಎಂದಾಕ್ಷಣ, ಎಲ್ಲವನ್ನೂ ಒಮ್ಮೆಯೇ ತೆಗೆದುಕೊಂಡು ಉಡಾಯಿಸಿ ಬಿಡುತ್ತೇನೆ ಎಂದು ಎಂಟು ವಾರಗಳ ಪ್ಲಾನ್ ಮಾಡುವುದಂತೂ ದೂರದ ಮಾತು! ಏನಾದರೂ ಎರಡು ವಾರಗಳ ರಜೆ ತೆಗೆದುಕೊಂಡರೆ, ಓಕೆ, ಪರವಾಗಿಲ್ಲ... ಮೂರಕ್ಕಿಂತ ಹೆಚ್ಚು ತೆಗೆದುಕೊಂಡರೆ, ವೆಕೇಷನ್ ಮುಗಿಸಿ ಆಫ಼ೀಸಿಗೆ ಬರಲೇ ಬೇಡ ಎಂದು ಮ್ಯಾನೇಜ್‌ಮೆಂಟ್ ನವರು ಹೇಳಿದರೂ ಆಶ್ಚರ್ಯವೇನೂ ಇಲ್ಲ, ಹುಷಾರ್!


ಒಂಥರಾ ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ, ಎನ್ನುತ್ತಾರಲ್ಲ ಹಾಗೆ.