
ಎಲ್ಲರೂ ನಾನೇಕೆ ಬರೆಯುತ್ತೇನೆ ಅನ್ನೋ ಸ್ವವಿಮರ್ಶೆಯಲ್ಲಿ ತೊಡಗಿರುವಾಗ, ನನಗೇಕೆ ಈ ರೀತಿಯ ಆಲೋಚನೆ ಬಂತು ಅಂತ ಯೋಚಿಸಿಕೊಳ್ಳುತ್ತಾ ಹೋದ ಹಾಗೆ, ಅನೇಕ ಗಹನವಾದ ವಿಷಯಗಳು ಹೊರಬಂದವು. ಅದನ್ನು, ನಿಮ್ಮೆಲ್ಲರ ಜೊತೆಯಲ್ಲಿ ಹಂಚಿಕೊಂಡರೆ ಹೇಗೆ ಎನ್ನಿಸಿದ್ದರಿಂದ ಈ ಲೇಖನವನ್ನು ಬರೆಯುತ್ತಿದ್ದೇನೆ.
ಯಾವುದೇ ಒಂದು ಸಮಾಜದಲ್ಲಿ, ನೂರಕ್ಕೆ ಎಷ್ಟು ಜನ ಕ್ರಿಯೇಟಿವ್ ಆಗಿ ಯೋಚಿಸುತ್ತಾರೆ, ಎಷ್ಟು ಜನ ನಿಜವಾಗಿಯೂ ಬರೆಯುತ್ತಾರೆ, ಎಷ್ಟು ಜನ ಅವುಗಳನ್ನು ಓದುತ್ತಾರೆ ಎಂದುಕೊಂಡರೆ ನಿಮಗೆ ಆಶ್ಚರ್ಯವಾಗುತ್ತದೆ. ನೂರು ವರ್ಷಗಳ ಇತಿಹಾಸವನ್ನು ಅಧ್ಯಯನ ಮಾಡಿದರೆ, ಒಂದು ಕಾಲದಲ್ಲಿ ಬರೀ ಪ್ರಿಂಟ್ ಮತ್ತು ರೇಡಿಯೋ ಮಾಧ್ಯಮಕ್ಕೆ ಮೀಸಲಾದ ಜನ ಮತ್ತು ಬರಹಗಾರರು, ನೂರು ವರ್ಷಗಳಲ್ಲಿ ಅದೆಷ್ಟೋ ಪಟ್ಟು ಹೆಚ್ಚಿನ ಮಟ್ಟದಲ್ಲಿ ಕಂಟೆಂಟ್ ಕ್ರಿಯೇಟರ್ಸ್ ಆಗಿ ಕಂಡುಬರುತ್ತಾರೆ. ಇತ್ತೀಚಿನ ಸೋಶಿಯಲ್ ಮೀಡಿಯಾದಲ್ಲಿ ಮಾನವ ನಿರ್ಮಿತ ಕಂಟೆಂಟ್‌ಗಳನ್ನೂ ಮೀರಿ, ಕೃತಕ ಬುದ್ಧಿಮತ್ತೆಯಿಂದ ತಯಾರಾದ ಕಂಟೆಂಟ್‌ಗಳೂ ಇತ್ತೀಚೆಗೆ ನಮ್ಮ ಸುತ್ತಲೂ ಗಿರಕಿ ಹೊಡೆಯತೊಡಗಿವೆ.
ಒಂದಾನೊಂದು ಕಾಲದಲ್ಲಿ ಪ್ರೊಫ಼ೆಷನಲ್ ಬರಹಾರರು, ಆಸ್ಥಾನ ಪಂಡಿತರು ಮೊದಲಾದ ಮಹಾನ್/ಗಣ್ಯ ವ್ಯಕ್ತಿಗಳು ಮಾತ್ರ ಒಂದು ಪುಸ್ತಕವನ್ನು ಹೊರ ತರಲು ಸಾಧ್ಯವಾಗುತ್ತಿತ್ತು. ಒಂದು ಉನ್ನತ ಮಟ್ಟದ ಜರ್ನಲ್‌ನಲ್ಲಿ ಪಬ್ಲಿಷ್ ಮಾಡಲು ಸಾಧ್ಯವಾಗುತ್ತಿತ್ತು. ಆಗೆಲ್ಲ ೧-೩% ಪ್ರತಿಶತ ಜನ ಬರೆಯುತ್ತಿದ್ದರೆ, ಮಿಕ್ಕವರು, ಅದರಲ್ಲೂ ಅಕ್ಷರಸ್ಥರು ಅದನ್ನು ಬಳಸುತ್ತಿದ್ದರು, ತಮ್ಮ ಮನರಂಜನೆ ಅಥವಾ ತಿಳುವಳಿಕೆಯ ದೃಷ್ಟಿಯಿಂದ. ಆಗ ಬರೆಯುತ್ತಿದ್ದವರ ಸಂಖ್ಯೆಗೆ ಈಗಿನ ಬರೆಯುವವರ ಸಂಖ್ಯೆಯನ್ನು ಹೋಲಿಸಿದಾಗ, ಪ್ರೊಫ಼ೆಷನಲ್ ಬರಹಗಾರರ ಸಂಖ್ಯೆಯಲ್ಲಿ ಗಣನೀಯ ಹೆಚ್ಚುಳವನ್ನು ಕಾಣಬಹುದು.
ಆದರೆ, ಆಗಿನ ಹಾಗೆ, ಈಗಿನ ಬರಹಗಾರರು, ಕಂಟೆಂಟ್ ಕ್ರಿಯೇಟರುಗಳು, ಪೆನ್ನು, ಪೆನ್ಸಿಲ್ ಬಳಸಿ ಪುಸ್ತಕಗಳಲ್ಲಿ ಬರೆಯಬೇಕು ಎಂದೇನೂ ಇಲ್ಲ. ಹೆಚ್ಚಿನ ಬರಹಗಾರರು, ನನ್ನನ್ನೂ ಸೇರಿ, ಇತ್ತೀಚೆಗೆ ಕೇವಲ ಕಂಪ್ಯೂಟರ್‌ನಲ್ಲಿ ಮಾತ್ರ "ಬರೆಯುವ" ಲೇಖಕರಾಗಿರುವುದು ಇತ್ತೀಚಿನ ವಿಶೇಷ. ಯಾವುದೇ ಕೈಬರಹದ ಮ್ಯಾನುಸ್ಕ್ರಿಪ್ಟನ್ನು ನಾವುಗಳು ನೋಡಿಯೇ ಅದೆಷ್ಟೋ ವರ್ಷಗಳಾಗಿವೆ.
ಉದಾಹರಣೆಗೆ ಕನ್ನಡ ಪುಸ್ತಕಗಳ ಪ್ರಕಟಣೆಯ ವಿಚಾರವನ್ನು ಸೂಕ್ಷ್ಮವಾಗಿ ನೋಡಿದಾಗ, ಈ ಎರಡು ಅಂಶಗಳನ್ನು ಗಮನಿಸಬಹುದು:
- ಕಳೆದ ನೂರು ವರ್ಷಗಳಲ್ಲಿ, ಕನ್ನಡದ ೫೦ ಪ್ರತಿಶತ ಟೈಟಲ್‌ಗಳನ್ನು ಪಬ್ಲಿಕ್ ಲೈಬ್ರರಿಗಳಿಗೋಸ್ಕರ ಪ್ರಕಟಿಸಲಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ, ಲೇಖಕರು ನೇರವಾಗಿ ತಮ್ಮ ಓದುಗರನ್ನು ತಲುಪುವುದನ್ನು ನೋಡಬಹುದು.
- ಕನ್ನಡದಲ್ಲಿ ಎಲೆಕ್ಟ್ರಾನಿಕ್ ಪುಸ್ತಕ ಮಾಧ್ಯಮ (ಇ-ರೀಡರ್ಸ್) ಅಷ್ಟೊಂದಾಗಿ ಬೆಳೆಯದಿದ್ದರೂ, ಪ್ರತಿಲಿಪಿಯಂತಹ ಪ್ಲಾಟ್‌ಫ಼ಾರ್ಮ್ ಮುಖೇನ ಕಳೆದ ೬ ವರ್ಷಗಳಲ್ಲಿ, ಪಿಡಿಎಫ಼್ ಹಂಚಿಕೊಳ್ಳುವಿಕೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ.
- ದಕ್ಷಿಣ ಭಾರತದಲ್ಲಿ ಖರ್ಚಾಗುವ ಪುಸ್ತಕಗಳಲ್ಲಿ, ಕನ್ನಡ ಪುಸ್ತಕಗಳ ಮಾರುಕಟ್ಟೆ ಸುಮಾರು ೨೫ ಪ್ರತಿಶತ ಇದೆ (ರಾಷ್ಟ್ರಮಟ್ಟದಲ್ಲಿ ಹಿಂದಿಯ ಪುಸ್ತಕಗಳ ಪಾಲು, ಸುಮಾರು ೩೫ ಪ್ರತಿಶತ ಮಾತ್ರ)
- ೨೦೨೬ರಲ್ಲಿ, ಈ ಲೇಖನ ಬರೆಯುವ ಹೊತ್ತಿಗೆ, ಸುಮಾರು ೧೨೦-೧೫೦ ಪುಸ್ತಕಗಳು, ಪ್ರತೀವಾರ ಬಿಡುಗಡೆಗೊಳ್ಳುತ್ತವೆ (ಅನೇಕ ಫ಼ಾರ್ಮ್ಯಾಟುಗಳಲ್ಲಿ)
ಇಷ್ಟೆಲ್ಲ ಪುಸ್ತಕಗಳು ಹೊರಬರುತ್ತಿರುವಾಗ, ನಾವೇಕೆ ಓದುತ್ತೇವೆ ಎಂದು ಕೇಳಿಕೊಳ್ಳುವುದು ಹಾಸ್ಯಾಸ್ಪದವಾಗಿ ಕಂಡುಬರಬಹುದು. ಅದರಲ್ಲೂ, ನಮಗೆ ಬೇಕಾದ ಮಾಹಿತಿ ಎಲ್ಲ ಇಂಗ್ಲೀಷ್ ಮಾಧ್ಯಮದಲ್ಲೇ ಸಿಕ್ಕುತ್ತಿರುವುದಾದರೆ, ನಾವು ಕನ್ನಡ ಪುಸ್ತಕಗಳನ್ನು ಏಕೆ ಓದಬೇಕು? ವರ್ಷಕ್ಕೆ ೭೨೦೦ ಪುಸ್ತಕದಂತೆ ಬಿಡುಗಡೆಯಾಗಿ, ಅಂದರೆ ದಿನಕ್ಕೆ ಸುಮಾರು ೨೦ ಪುಸ್ತಕಗಳ ಬಿಡುಗಡೆಯಾಗುತ್ತಿರುವಾಗ ಅವುಗಳನ್ನು ಕೊಳ್ಳುವವರು ಯಾರು? ಓದುವವರು ಯಾರು?
ನನ್ನ ಪ್ರಕಾರ, ನಾವು ಆಯಾ ವಿಷಯಗಳಿಗೆ ತಕ್ಕಂತೆ, ಆಯಾ ಭಾಷೆಯಲ್ಲಿ ಪುಸ್ತಕವನ್ನು ಓದುವುದು ಸರಿ ಎನಿಸುತ್ತದೆ. ಉದಾಹರಣೆಗೆ, ಆಫ಼ೀಸಿಗೆ ಸಂಬಂಧಿಸಿದ ಲೇವಾದೇವಿ, ಕೆಲಸ ಕಾರ್ಯಗಳನ್ನು ನಾವು ಕನ್ನಡದಲ್ಲಿ ಹೇಗೆ ಊಹಿಸಿಕೊಳ್ಳಲಾರೆವೋ, ಹಾಗೆಯೇ, ನಮ್ಮೂರಿನಲ್ಲಿ ಗಡಚಿಕ್ಕುವಂತೆ ಮಳೆ ಹೊಯ್ಯುವ ಶಬ್ದ, ತದನಂತರ ಮಣ್ಣಿನಿಂದ ಹೊರಬರುವ ಹಿತವಾದ ಪರಿಮಳ ಇವುಗಳನ್ನೂ ಕೂಡ ನಾನು ಇಂಗ್ಲೀಷಿನಲ್ಲಿ ಊಹಿಸಿಕೊಳ್ಳಲಾರೆ.
ನಾನು ಕನ್ನಡದಲ್ಲಿ ಕತೆಗಳನ್ನೋ, ಕಾದಂಬರಿಗಳನ್ನೋ ಓದಿ, ಆಯಾ ಪಾತ್ರಗಳು ಮತ್ತು ಅವುಗಳ ಹಿನ್ನೆಲೆಯಲ ಮಿಳಿತಗೊಂಡು, ಆಯಾ ಪಾತ್ರಗಳ ಸಮಸ್ಯೆ, ಸಂವೇದನೆಗಳು ನಮ್ಮವೇ ಎಂದು ಯೋಚಿಸಿಕೊಳ್ಳುತ್ತೇವಲ್ಲ, ಆ ಭಾಗ್ಯ, ಇಂಗ್ಲೀಷಿನಲ್ಲಿ ಪಾತ್ರಗಳನ್ನು ಅಭ್ಯಾಸ ಮಾಡಿದಾಗ ನಮ್ಮ ಚರ್ಮದ ಕೆಳಗೇ ಇಳಿಯದು ಎನ್ನುವಂತಾಗುತ್ತದೆ. ಬೇಕಾದರೆ, ನೀವು, ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಕೃತಿಯ ಮೊದಲ ಅಧ್ಯಾಯವನ್ನು ಕನ್ನಡ ಮತ್ತು ಇಂಗ್ಲೀಷಿನಲ್ಲಿ ಬೇರೆ ಬೇರೆಯಾಗಿ ಓದಿ ನೋಡಿ. ನಾಯಿ-ಗುತ್ತಿ, ಗುತ್ತಿ-ನಾಯಿ ನಿಮಗೆ ಯಾವ ರೀತಿಯ ಮೋಡಿಯನ್ನು ಮಾಡಬಲ್ಲರು ಎಂದು.
ನಾನು ಏಕೆ ಕನ್ನಡ ಪುಸ್ತಕಗಳನ್ನು ಓದುತ್ತೇನೆಂದರೆ, ಅದರ ಮುಖೇನ, ನಾನು ಅಲ್ಲಿನ ಮಾನವೀಯ ಮೌಲ್ಯ, ಭಾವನೆಗಳ ನಡುವೆ ಒಂದು ಸಂಪರ್ಕಸಾಧಿಸಿಕೊಂಡು, ಅವುಗಳನ್ನು ಅರ್ಥ ಮಾಡಿಕೊಂಡು, ಆಯಾ ಪಾತ್ರಗಳು ನಮ್ಮ ಸ್ನೇಹಿತರೋ, ಬಂಧು-ಮಿತ್ರರೋ ಎಂದು ಯೋಚಿಸುವಂತೆ ಮಾಡುತ್ತವಲ್ಲ? ಆ ಸಮಯವನ್ನು ನಾವು ವ್ಯಯಿಸುವ ಮಟ್ಟಿಗೆ ಅದೊಂದು ಧ್ಯಾನವೇ ಎಂದು ನನ್ನ ನಂಬಿಕೆ. ಜೊತೆಗೆ, ಆಯಾ ಲೇಖಕರ ಸಾಮರ್ಥ್ಯಕ್ಕೆ ತಕ್ಕೆಂತೆ ಅವರ ಉಪಮೆ, ರೂಪಕ, ಉತ್ಪ್ರೇಕ್ಷೆಗಳನ್ನೆಲ್ಲ ಅನುಭವಿಸಿ, ಅವುಗಳನ್ನು ನಮ್ಮ ಮನದಲ್ಲಿ ಪುನರ್‌ಸೃಷ್ಟಿಸಿಕೊಂಡು ಚಪ್ಪರಿಸುತ್ತೇವೆಲ್ಲ, ಅದಕ್ಕಿಂತ ಮಿಗಿಲಾದ ಸಂತೋಷ ಓದುವುದನ್ನು ಬಿಟ್ಟು ಎಲ್ಲಿದೆ ಹೇಳಿ? ಕೊನೆಯದಾಗಿ, ನಾವು ನಮ್ಮೂರಿನ ನೆರೆ-ಹೊರೆ, ಭಾಷೆ-ಬಂಧು, ನೆಂಟರು-ಇಷ್ಟರು ಇವರನ್ನೆಲ್ಲ ಕಳೆದುಕೊಂಡು ದೂರ ಬಂದಿದ್ದೇವೆಲ್ಲ, ನಮಗೆ ಈ ಕನ್ನಡ ಕೃತಿಗಳಲ್ಲದೇ ಮತ್ತಿನ್ಯಾರು ತಾನೆ ಆ ಪರಿಸರವನ್ನು ನಮಗೆ ಕಟ್ಟಿಕೊಡಬಲ್ಲರು?