
ಧರ್ಮ-ಅಧರ್ಮಗಳ ಹೋರಾಟ
ಎಲ್ಲರೂ ಅಂದುಕೊಂಡಿರೋ ಹಾಗೆ ಇದು ಧರ್ಮದ ಜಯವಲ್ಲ... ನಿಜವಾಗಿಯೂ, ಸಾವಿರಾರು ವರ್ಷಗಳಿಂದ ಧರ್ಮವನ್ನು ನಂಬಿಕೊಂಡು ಬಂದ ನಾವುಗಳು, ನಮ್ಮನ್ನು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ ಮತ್ತು ಎಚ್ಚರಿಸಿಕೊಳ್ಳಬೇಕಾದ ಸಮಯ ಕೂಡ.
ಇಲ್ಲಿ ಮೇಲ್ನೋಟಕ್ಕೆ ಒಂದು ಸಣ್ಣ ಪ್ರಮಾಣದ ಸಂಚು ಎಂದು ಗೋಚರಿಕೆಯಾದರೂ, ಇದರ ಅಂತರಾಳದಲ್ಲಿ ನಮ್ಮ ಎಲ್ಲರ ಗೊಂದಲ, ಒಗ್ಗಟ್ಟಿಲ್ಲದಿರುವಿಕೆ, ರಾಜಕೀಯ ಪ್ರೇರಿತ ಆಲೋಚನೆಗಳು ಎದ್ದು ಕಾಣುತ್ತವೆ.
ಸತ್ತೋರು ಯಾರೋ? ಆದರೆ, ಸತ್ತವರ ಹೆಸರಿನಲ್ಲಿ ತಮ್ಮ ಬೇಳೆಕಾಳುಗಳನ್ನು ಬೇಯಿಸಿಕೊಳ್ಳುವ ಇವರನ್ನೆಲ್ಲ ನಂಬುವುದಾದರೂ ಹೇಗೆ?
ಇನ್ನು ಎರಡನೆಯ ವಿಷಯ, ಬಹುವಾಗಿ ಕಾಡುವಂಥದ್ದು, ಸ್ಥಳೀಯ ವಿಷಯಗಳ ಬಗ್ಗೆ ಎಲ್ಲೋ ಕುಳಿತು ಅಥೆಂಟಿಕ್ ಆಗಿ ಯೂ ಟ್ಯೂಬ್ ವಿಡಿಯೋಗಳನ್ನು ಮಾಡಿ, ಲಕ್ಷಾಂತರ ಜನರನ್ನು ನಂಬಿಸಿರುವುದು ಮತ್ತು ಅವರ ನಂಬಿಕೆಗಳ ಫ಼ೌಂಡೇಶನ್ ಅನ್ನು ಅಲುಗಾಡಿಸಿರುವುದು. ಇನ್ನಾದರೂ ಜನರು, ಯೂ ಟ್ಯೂಬ್ ನಲ್ಲಿ ತೋರಿಸಿರೋದೆಲ್ಲ ಸತ್ಯವಲ್ಲ ಎಂದು ಮನಗಾಣುವುದಾದರೂ ಹೇಗೆ?
ಈ ಸೋ ಕಾಲ್ಡ್ ಯೂ ಟ್ಯೂಬರುಗಳು, ಈಗಾಗಲೇ ಅಸ್ಥಿತ್ವಕ್ಕೆ ಬಂದಿದ್ದ ವಾರ್ತಾವಾಹಿನಿಗಳಿಗೆ ಸಡ್ಡು ಹೊಡೆದಂತೆ ರಾತ್ರೋ ರಾತ್ರಿ ಮಿಲಿಯನ್ ಗಟ್ಟಲೆ ಫ಼ಾಲೋವರುಗಳನ್ನು ಹಾಕಿಕೊಂಡು ದುಡ್ಡು ಮಾಡಿದ್ದೇ ಬಂತು. ಅವರೇನು ಜರ್ನಲಿಸಮ್ ಅನ್ನು ಓದಿದೋರಲ್ಲ, ವಿಷಯವನ್ನು ಕೂಲಂಕಷವಾಗಿ ವಿವೇಚನೆಯಿಂದ ಆಲೋಚಿಸಿ, ವಿಮರ್ಶಿಸಿ, ಅಗೆದು-ತೆಗೆದು ಇನ್ವೆಷ್ಟಿಗೇಟಿವ್ ಜರ್ನಲಿಸಮ್ ಅನ್ನು ಮಾಡಿದವರೇ ಅಲ್ಲ. ಆದರೆ, ಅಂಥವರಿಗೆಲ್ಲ ನಮ್ಮ ಸಮುದಾಯ ಸೊಪ್ಪು ಹಾಕುವುದನ್ನು ನೋಡಿದರೆ ಹೇಸಿಗೆಯಾಗುತ್ತದೆ.